ಮೋಷೆ, ದಯಾನ್
1915-. ಇಸ್ರೇಲಿನ ಯೋಧ. ದಂಡನಾಯಕ; ರಕ್ಷಣ ಮತ್ತು ವಿದೇಶಾಂಗ ಮಂತ್ರಿ ಆಗಿದ್ದವರು. ತಂದೆ ಷ್ಮುಯೆಲ್ ದಯಾನ್, ತಾಯಿ ದ್ವೋರಾ. ಇವರು ಮೂಲತಃ ರಷ್ಯದ ಉಕ್ರೇನ್ ಪ್ರದೇಶದವರು. ಪ್ಯಾಲಸ್ತೀನ್ ಪ್ರದೇಶಕ್ಕೆ ವಲಸೆ ಬಂದರು. ಮೋಷೆ ದಯಾನ್ ಈ ದಂಪತಿಗಳ ಎರಡನೆಯ ಮಗು.

	ಅರಬರ ನಡುವೆ ಇಸ್ರೇಲ್ ರಾಜ್ಯವನ್ನು ಸ್ಥಾಪಿಸಲು ಹೋರಾಟ ನಡೆಸಿದ ಮೊದಲಿಗರಲ್ಲಿ ಮೋಷೆ ದಯಾನರ ತಂದೆಯೂ ಒಬ್ಬರು. ಷ್ಮುಯೆಲ್ ದಯಾನರಿಗೆ ಔಷದಿ ತರಲು ಮೋಷೆ ಬಾರ್‍ಸ್ಕಿ ಎಂಬ ಹತ್ತೊಂಬತ್ತು ವರ್ಷದ ಕರುಣ ಹೊರಗೆ ಹೋಗಿದ್ದಾಗ ಅರಬರು ಅವನನ್ನು ಕೊಂದರಂತೆ. ಅವನ ಮೋಷೆ ಎಂಬ ಹೆಸರನ್ನೆ ಷ್ಮುಯೆಲ್ ತಮ್ಮ ಮಗನಿಗೆ ಇಟ್ಟರೆಂದು ಹೇಳಲಾಗಿದೆ. ಮೋಷೆಯ ಬಾಲ್ಯದ ದಿನಗಳು ರೋಗದಲ್ಲೇ ಕಳೆದವು. 14ನೆ ವರ್ಷದಲ್ಲಿ ಇವರು ಯಹೂದ್ಯರು ರಾಜ್ಯ ಸ್ಥಾಪನೆಗಾಗಿ ಭೂಗತ ಹೋರಾಟ ನಡೆಸುತ್ತಿದ್ದ ಹಗಾನಾ ಎಂಬ ಸಂಘಟನೆಗೆ ಸೇರಿಕೊಂಡರು. ತರುಣ ದಯಾನರಿಗೆ ಭೀತಿಯೆಂಬುದೇ ಇರಲಿಲ್ಲ ಎಂದು ಇವರ ಆಗಿನ ಜೊತೆಗಾರರು ಹೇಳುವುದುಂಟು.

	ಪ್ಯಾಲಸ್ತೀನ್ ಪ್ರದೇಶದ ಪ್ರಾದೇಶಾಧಿಕಾರ ಪಡೆದಿದ್ದ ಬ್ರಿಟಿಷರು ಅಲ್ಲಿ ಯೆಹೂದಿ ಪೋಲೀಸ್ ರಾಜ್ಯ ಸ್ಥಾಪನೆ ಮಾಡಿದಾಗ ದಯಾನರೂ ಅದಕ್ಕೆ ಬೆಂಬಲ ನೀಡಿದರು. ಆದರೆ ತಮ್ಮ ಹೋರಾಟದ ಗುಂಪಿನ ಸದಸ್ಯರಾಗಿಯೂ ಉಳಿದರು. ಆ ಸಮಯದಲ್ಲಿ ದಯಾನರ ಬುದ್ಧಿಶಕ್ತಿಯೂ ಧೈರ್ಯವೂ ಪ್ರಕಾಶಕ್ಕೆ ಬಂದವು. ಇವರ ಯುದ್ಧ ನೈಪುಣ್ಯ ಅಸಾಧಾರಣವಾಗಿತ್ತು. ಆಗ ಅಲ್ಲಿ ಹೋರಾಟದಲ್ಲಿ ನಿರತವಾಗಿದ್ದ ಹಲವಾರು ಯೆಹೂದಿ ಮಿಲಿಟರಿ ಸಂಸ್ಥೆಗಳು ಇವರ ಸೇವೆ ಪಡೆದುಕೊಳ್ಳಲು ತಮ್ಮ ತಮ್ಮಲ್ಲೆ ಸ್ಪರ್ಧಿಸುತ್ತಿದ್ದವು; 1939ರಲ್ಲಿ ದಯಾನರು ಕಾನೂನು ಬಾಹಿರವಾಗಿ ಸೇನಾಧಿಕಾರಿಗಳಿಗೆ ತರಬೇತಿ ನೀಡುತ್ತಿದ್ದಾರೆಂದು ದಸ್ತಗಿರಿಯಾಗಿ ಹದಿನಾರು ತಿಂಗಳೂಗಳ ಕಾರಾಗೃಹ ಶಿಕ್ಷೆಗೆ ಗುರಿಯಾದರು. ಮುಂದೆ ಫ್ರೆಂಚ್ ವಿಚಿ ಸರ್ಕಾರದ (ಹಿಟ್ಲರನ ಕೈಗೊಂಬೆ ಸರ್ಕಾರ) ವಿರುದ್ಧ ಹೋರಾಟ ನಡೆಸಲು ಇವರನ್ನು ವಿಮೋಚನೆಗೊಳಿಸಲಾಯಿತು. ಇವರು ಆಸ್ಟ್ರೇಲಿಯದ ಪಡೆಯಲ್ಲಿ ಸೇರಿ ಲೆಬನಾನಿನಲ್ಲಿ ಹೋರಾಟ ನಡೆಸುತ್ತಿದ್ದಾಗ ಗುಂಡೊಂದು ಹಾರಿಬಂದು ಕಿಟಕಿಯ ಗಾಜಿಗೆ ಬಡಿದು ಅದರ ಚೂರುಗಳು ಇವರ ಕಣ್ಣಿಗೂ ಕೈಗೂ ತಗುಲಿದವು. ಇವರ ಒಂದು ಕಣ್ಣು ಕುರುಡಾಯಿತು. ಮುಂದೆ ಆ ಕಣ್ಣಿನ ಮೇಲೆ ಸದಾ ಪಟ್ಟಿಯೊಂದನ್ನು ಧರಿಸುವುದು ಅಗತ್ಯವಾಯಿತು. ಆದರಿಂದಲೇ ದಯಾನರನ್ನು ಎಲ್ಲರೂ ಸುಲಭವಾಗಿ ಗುರುತಿಸಬಹುದಾಗಿತ್ತು.

	1950ರ ದಶಕದ ಆದಿಭಾಗದಲ್ಲಿ ದಯಾನ್ ಇಂಗ್ಲೆಂಡಿನಲ್ಲಿ ಸೇನಾ ಅಧಿಕಾರಿಗಳ ತರಬೇತಿ ಪಡೆದ ಮೇಲೆ ಇವರಿಗೆ ಇಸ್ರೇಲಿನ ಸೇನೆಯಲ್ಲಿ ಅಧಿಕರಿಯ ಸ್ಥಾನ ದೊರಕಿತು. ಬೆನ್‍ಗುರಿಯೆನ್ನರ ಸರ್ಕಾರದಲ್ಲಿ ಇವರನ್ನು ಸೇನಾ ಕಾರ್ಯಾಚರಣೆಗಳ ನಾಯಕರಾಗಿ ನೇಮಿಸಲಾಯಿತು. 1953ರಲ್ಲಿ ಇವರು ದಂಡನಾಯಕರಾದರು. 1956ಮತ್ತು 1967ರಲ್ಲಿ ಅರಬರ ವಿರುದ್ಧ ನಡೆದ ಯುದ್ಧಗಳಲ್ಲಿ ದಯಾನ್ ಪ್ರಮುಖ ಪಾತ್ರವಹಿಸಿದ್ದರು. ದಯಾನ್ ತಮ್ಮ ಕಾಲದ ಮಹಾ ಪ್ರತಿಭಾನ್ವಿತ ಸೇನಾನಿ ಎಂದು ಅನೇಕರು ಇವರನ್ನು ಬಣ್ಣಿಸಿದ್ದಾರೆ. ಆದರೆ ತಮ್ಮ ವಿರೋಧಿಗಳ ವಿಚಾರದಲ್ಲಿ ಇವರು ಸ್ವಲ್ಪವೂ ಕನಿಕರ ತೋರಿಸುತ್ತಿರಲಿಲ್ಲವೆಂದೂ ಹೇಳಲಾಗಿದೆ. ಇವರನ್ನು ತೀವ್ರವಾಗಿ ದ್ವೇಷಿಸುವವರೂ ಅಷ್ಟೇ ಉತ್ಕಟವಾಗಿ ಪ್ರೀತಿಸುವವರೂ ಇದ್ದರು. ಸೇನೆಯಿಂದ ನಿವೃತ್ತಿ ಹೊಂದಿದ ಮೇಲೆ ಇವರು ಅನುಕ್ರಮವಾಗಿ ರಕ್ಷಣಾಮಂತ್ರಿ ಮತ್ತು ವಿದೇಶಾಂಗ ಮಂತ್ರಿಯಾಗಿ ಸೇವೆ ಸಲ್ಲಿಸಿದರು.

	ಮೋಷೆ ದಯಾನರಿಗೆ ಇವರ ಪತ್ನಿ ರೂತರಲ್ಲಿ ಇಬ್ಬರು ಪುತ್ರರು ಒಬ್ಬ ಪುತ್ರಿಯೂ ಜನಿಸಿದರು. ಮೂವತ್ತಾರು ವರ್ಷಗಳ ಸಂಸಾರ ನಡೆಸಿದ ಮೇಲೆ ಇವರು ರೂತರೊಂದಿಗೆ ವಿವಾಹ ವಿಚ್ಛೇದನ ಪಡೆದರು.
(ಎಚ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ